Yashaswini Health Insurance Scheme- ಯಶಸ್ವಿನಿ ಆರೋಗ್ಯ ಯೋಜನೆ ನೋಂದಣಿ ಆರಂಭ | ₹5 ಲಕ್ಷವರೆಗೆ ಉಚಿತ ಚಿಕಿತ್ಸೆ ಪಡೆಯಲು ಈಗಲೇ ಅರ್ಜಿ ಹಾಕಿ
ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಈ ವರ್ಷವೂ ಯಥಾಪ್ರಕಾರ ಮುಂದುವರಿಯಲಿದ್ದು; ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ಸಹಕಾರ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಈ ಬಾರಿ ಯೋಜನೆಯಲ್ಲಿ ಹಲವು ಮಹತ್ವದ ಬದಲಾವಣೆಗಳು ಹಾಗೂ ಹೊಸ ಸೌಲಭ್ಯಗಳನ್ನು ಸೇರಿಸಲಾಗಿದ್ದು, ಹೆಚ್ಚಿನ ಜನರಿಗೆ ಆರೋಗ್ಯ ಸೇವೆ ತಲುಪಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ನವಜಾತ ಶಿಶುಗಳಿಗೂ ಚಿಕಿತ್ಸೆ ಹೊಸ ಸೌಲಭ್ಯ
ಈ ವರ್ಷದ ಯಶಸ್ವಿನಿ ಯೋಜನೆಯ ಪ್ರಮುಖ ವಿಶೇಷತೆ ಎಂದರೆ ನವಜಾತ ಶಿಶುಗಳಿಗೂ ತಾಯಿಯ ಕಾರ್ಡ್ ಆಧಾರದಲ್ಲಿ ಚಿಕಿತ್ಸೆ ಪಡೆಯುವ ಅವಕಾಶ ಕಲ್ಪಿಸಿರುವುದು. ಇದರಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ.
ಜನವರಿ 3, 2026ರಿಂದಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, 2025-26ನೇ ಸಾಲಿನಲ್ಲಿ ರಾಜ್ಯಾದ್ಯಂತ ಸುಮಾರು 50 ಲಕ್ಷ ಸದಸ್ಯರನ್ನು ಯೋಜನೆಯೊಳಗೆ ತರಲು ಗುರಿ ನಿಗದಿಪಡಿಸಲಾಗಿದೆ.
ಪ್ರಧಾನ ಅರ್ಜಿದಾರ ಮತ್ತು ಆತನ ತಂದೆ – ತಾಯಿ, ಪತಿ ಅಥವಾ ಪತ್ನಿ, ಮಕ್ಕಳು ಹಾಗೂ ಮೊಮ್ಮಕ್ಕಳು ಒಂದೇ ಕುಟುಂಬದ ಸದಸ್ಯರೆಲ್ಲರೂ ಯೋಜನೆಯ ಲಾಭ ಪಡೆಯಬಹುದು.
ಯಾರಿಗೆ ಎಷ್ಟು ವಂತಿಗೆ?
ಯಶಸ್ವಿನಿ ಯೋಜನೆಯಲ್ಲಿ ಸದಸ್ಯರಿಂದ ವಸೂಲಿ ಮಾಡಲಾಗುವ ವಂತಿಗೆಯನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಪ್ರತ್ಯೇಕವಾಗಿ ನಿಗದಿಪಡಿಸಲಾಗಿದೆ.
- ಗ್ರಾಮೀಣ ಪ್ರದೇಶ: ನಾಲ್ವರು ಸದಸ್ಯರ ಕುಟುಂಬಕ್ಕೆ ವಾರ್ಷಿಕ ವಂತಿಗೆ ₹500 ಹಾಗೂ ಹೆಚ್ಚುವರಿ ಸದಸ್ಯರಿದ್ದರೆ ಪ್ರತಿ ಸದಸ್ಯರಿಗೆ ₹100 ನಿಗದಿಪಡಿಸಲಾಗಿದೆ.
- ನಗರ ಪ್ರದೇಶ: ನಾಲ್ವರು ಸದಸ್ಯರ ಕುಟುಂಬಕ್ಕೆ ವಾರ್ಷಿಕ ವಂತಿಗೆ ₹1000 ಹಾಗೂ ಹೆಚ್ಚುವರಿ ಸದಸ್ಯರಿಗೆ ತಲಾ ₹200 ವಂತಿಗೆ ನಿಗದಿಪಡಿಸಲಾಗಿದೆ.
- ಎಸ್‌ಸಿ / ಎಸ್‌ಟಿ ಸದಸ್ಯರು: ಎಸ್‌ಸಿ / ಎಸ್‌ಟಿ ಸದಸ್ಯರ ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ. ಈ ವರ್ಗದ ಅರ್ಜಿದಾರರು ಯಾವುದೇ ವಂತಿಗೆ ನೀಡದೇ ಸದಸ್ಯತ್ವ ಪಡೆಯಬಹುದಾಗಿದೆ.
ಯೋಜನೆಯಡಿ 2000ಕ್ಕೂ ಹೆಚ್ಚು ಚಿಕಿತ್ಸೆಗಳು
ಯಶಸ್ವಿನಿ ಯೋಜನೆಯಡಿ ಒಟ್ಟು 2,128ಕ್ಕೂ ಹೆಚ್ಚು ವಿವಿಧ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿದ್ದು, ಇವುಗಳಲ್ಲಿ 478 ಐಸಿಯು (ICU) ಚಿಕಿತ್ಸೆಗಳು ಸೇರಿವೆ.
ಫಲಾನುಭವಿಗಳಿಗೆ ಜನರಲ್ ವಾರ್ಡ್’ನಲ್ಲಿ ಉಚಿತ ಚಿಕಿತ್ಸೆ ಸಿಗಲಿದೆ. ಸೆಮಿ ಸ್ಪೆಷಲ್ ಅಥವಾ ಸ್ಪೆಷಲ್ ವಾರ್ಡ್ ಆಯ್ಕೆ ಮಾಡಿದರೆ, ಅದರ ಹೆಚ್ಚುವರಿ ವೆಚ್ಚವನ್ನು ಫಲಾನುಭವಿಗಳೇ ಭರಿಸಬೇಕು
ಯೋಜನೆಯಡಿ ಲಭ್ಯವಿರುವ ಚಿಕಿತ್ಸೆಗಳ ಸಂಪೂರ್ಣ ಪಟ್ಟಿ, ಆಸ್ಪತ್ರೆಗಳ ವಿವರಗಳು ಹಾಗೂ ಶಸ್ತ್ರಚಿಕಿತ್ಸೆಗಳ ಮಾಹಿತಿಯನ್ನು ‘ಸಹಕಾರ ಸಿಂಧು’ ಅಥವಾ ಯಶಸ್ವಿನಿ ಟ್ರಸ್ಟ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪಡೆಯಬಹುದು.

ಏಪ್ರಿಲ್ 1ರಿಂದ ಯಶಸ್ವಿನಿ ಕಾರ್ಡ್ ವಿತರಣೆ
ಯೋಜನೆಯಡಿ ನೋಂದಾಯಿಸಿದ ಸದಸ್ಯರಿಗೆ ಯೂನಿಕ್ ಐಡಿ ಹೊಂದಿರುವ ಪ್ಲಾಸ್ಟಿಕ್ ಯಶಸ್ವಿನಿ ಕಾರ್ಡ್ ಅನ್ನು ಏಪ್ರಿಲ್ 1, 2026ರಿಂದ ವಿತರಿಸಲಾಗುತ್ತದೆ.
ಕಾರ್ಡ್ ಕಳೆದುಹೋದರೆ ₹250 ಶುಲ್ಕ ಪಾವತಿಸಿ ಡೂಪ್ಲಿಕೇಟ್ ಕಾರ್ಡ್ ಪಡೆಯಲು ಅವಕಾಶವಿದೆ. ತುರ್ತು ಸಂದರ್ಭಗಳಲ್ಲಿ ಕಾರ್ಡ್ ಇಲ್ಲದಿದ್ದರೆ ಸಹಕಾರ ಸಂಘದ ದಾಖಲೆಗಳ ಆಧಾರದಲ್ಲಿ ತಾತ್ಕಾಲಿಕ ಇ-ಕಾರ್ಡ್ ಪಡೆದು ಚಿಕಿತ್ಸೆ ಪಡೆಯಬಹುದು.
ಚಿಕಿತ್ಸಾ ಮಿತಿ ಎಷ್ಟು?
ಈ ಯೋಜನೆಯ ಲಾಭ ಪಡೆಯಲು ಪ್ರಮುಖವಾಗಿ ಸಹಕಾರ ಸಂಘದ ಸದಸ್ಯರಾಗಿರಬೇಕು. ಯಶಸ್ವಿನಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ ₹5 ಲಕ್ಷವರೆಗೆ ನಗದು ರಹಿತ ಚಿಕಿತ್ಸೆ ಲಭ್ಯವಿದೆ.
ಸಹಕಾರ ಸಂಘದ ನೌಕರರಾಗಿದ್ದರೆ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರಬೇಕು. ಮಾಸಿಕ ವೇತನ ₹30,000 ಮೀರಬಾರದು. ₹30,000ಕ್ಕಿಂತ ಹೆಚ್ಚು ಸಂಬಳ ಹೊಂದಿರುವವರಿಗೆ ಯೋಜನೆ ಅನ್ವಯಿಸುವುದಿಲ್ಲ.
ಸುಳ್ಳು ಮಾಹಿತಿ ನೀಡಿದರೆ ಕಠಿಣ ಕ್ರಮ
ನೋಂದಣಿ ವೇಳೆ ಸುಳ್ಳು ಮಾಹಿತಿ ನೀಡಿ ಸದಸ್ಯತ್ವ ಪಡೆದರೆ, ಅಂತಹವರ ಸದಸ್ಯತ್ವವನ್ನು ರದ್ದುಗೊಳಿಸುವುದರ ಜೊತೆಗೆ, ಈಗಾಗಲೇ ಪಾವತಿಸಿದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ.
ಪ್ರಮುಖ ದಿನಾಂಕಗಳ ಪಟ್ಟಿ
- ನೋಂದಣಿ ಆರಂಭ: ಜನವರಿ 03, 2026
- ನೋಂದಣಿ ಕೊನೆಯ ದಿನ: ಮಾರ್ಚ್ 20-31, 2026
- ಚಿಕಿತ್ಸಾ ಅವಧಿ: ಏಪ್ರಿಲ್ 1, 2026 ರಿಂದ ಮಾರ್ಚ್ 31, 2027
ಯಶಸ್ವಿನಿ ಯೋಜನೆ ಎಂದರೆ ಕೇವಲ ವಿಮಾ ಯೋಜನೆಯಲ್ಲ, ಇದು ಲಕ್ಷಾಂತರ ಕುಟುಂಬಗಳಿಗೆ ಆರೋಗ್ಯದ ಭರವಸೆ. ಕಡಿಮೆ ವಂತಿಗೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿಕಿತ್ಸೆ ಸಿಗುತ್ತಿರುವುದು ಈ ಯೋಜನೆಯ ದೊಡ್ಡ ಶಕ್ತಿ. ಅರ್ಹರಾಗಿರುವವರು ಸಮಯ ಕಳೆದುಕೊಳ್ಳದೆ ನೋಂದಣಿ ಮಾಡಿಕೊಂಡು, ತಮ್ಮ ಹಾಗೂ ಕುಟುಂಬದ ಆರೋಗ್ಯವನ್ನು ಸುರಕ್ಷಿತಗೊಳಿಸಿಕೊಳ್ಳಿ…
ಅಧಿಕೃತ ವೆಬ್‌ಸೈಟ್ ಲಿಂಕ್: sahakarasindhu.karnataka.gov.in
Hi, this is a comment.
To get started with moderating, editing, and deleting comments, please visit the Comments screen in the dashboard.
Commenter avatars come from Gravatar.